ಎನಿಯಸ್, ಕ್ವಿಂಟಸ್
	ಕ್ರಿ. ಪೂ. ಸು. 239-169. ಪ್ರಾಚೀನ ರೋಮನರ ಶ್ರೇಷ್ಠ ಕವಿಗಳಲ್ಲಿ ಒಬ್ಬ. ಲ್ಯಾಟಿನ್ ಸಾಹಿತ್ಯ ಪ್ರವರ್ತಕರಲ್ಲಿ ಗಣ್ಯ. ಸಿಸಿರೊ ಯುಗಕ್ಕೆ ಮುಂಚಿನ ಮಹಾಕವಿ. ತಮ್ಮ ರಾಷ್ಟ್ರೀಯ ಸಾಹಿತ್ಯಕ್ಕೆ ಆತನೇ ಜನಕನೆಂದು ರೋಮನರು ನಂಬಿದ್ದರು. ದಿಟವಾಗಿ ಆ ಮರ್ಯಾದೆಗೆ ಎನಿಯಸ್ ಅರ್ಹನಾಗಿದ್ದ. ಇಟಲಿಯ ಒಂದು ಭಾಗವಾದ ರೂಡಿಯಿ ಅವನ ಜನ್ಮಸ್ಥಾನ. ಅವನ ತಾಯಿನುಡಿ ಅಸ್ಕನ್, ರೂಡಿಯಿ ಮೇಲೆ ಗ್ರೀಸಿನ ಪ್ರಭಾವವೂ ಇದ್ದದ್ದರಿಂದ ಅವನಿಗೆ ಗ್ರೀಕ್ ನುಡಿಯ ಪರಿಚಯವೂ ಆಗಿತ್ತು. ರೋಮನರ ಸೈನ್ಯಕ್ಕೆ ಸೇರಿ. ನೂರರ ನಾಯಕನಾಗಿ, ಸಾರ್ಡೀನಿಯದ ಕದನರಂಗದಲ್ಲಿ ಭಾಗವಹಿಸಿದ. ಅವನ ಯುದ್ಧಕೌಶಲವೂ ಮತ್ತಾವ ಗುಣಲಕ್ಷಣವೂ ಅಲ್ಲಿ ಮುಖ್ಯಾಧಿಕಾರಿಯಾಗಿದ್ದ ಕೇಟೊವನ್ನು ಆಕರ್ಷಿಸಿತು. ರೋಮಿಗೆ ಹಿಂತಿರುಗುವಾಗ ಕೇಟೊ ತನ್ನೊಡನೆ ಎನಿಯಸ್ಸನ್ನು ಕರೆದುಕೊಂಡು ಹೋದ. ತನ್ನ ಮಿಕ್ಕ ಮೂವತ್ತು ಮೂವತ್ತೈದು ವರ್ಷವನ್ನೆಲ್ಲ ಎನಿಯಸ್ ರೋಮಿನಲ್ಲೇ ಕಳೆದ. ಆಸ್ಕನ್, ಗ್ರೀಕ್, ಲ್ಯಾಟಿನ್ ಈ ಮೂರು ಭಾಷೆಗಳಲ್ಲೂ ಆತ ಉತ್ಕøಷ್ಟ ಪಾಂಡಿತ್ಯವನ್ನು ಸಂಪಾದಿಸಿಕೊಂಡು ತನಗೆ ಹೃದಯಗಳು ಮೂರು-ಎಂದು ಹೇಳಿಕೊಳ್ಳುತ್ತಿದ್ದನಂತೆ. ಉನ್ನತ ವಂಶಸ್ಥರೊಂದಿಗೂ ಧನವಂತರೊಂದಿಗೂ ಬೇಕಾದಷ್ಟು ಬಳಕೆಯಿದ್ದರೂ ಸಾಮಾನ್ಯ ಮಂದಿಯ ಕೇರಿಯಲ್ಲೇ ಆತ ನಿವಾಸ ಮಾಡಿಕೊಂಡು ಬಾಳುತ್ತಿದ್ದ. ಪಾಠ ಹೇಳುತ್ತ ಪುಸ್ತಕ ಬರೆಯುತ್ತ ತನ್ನ ಮಿತಜೀವನಕ್ಕೆ ಸಾಕಾದಷ್ಟು ದ್ರವ್ಯವನ್ನು ಅರ್ಜಿಸಿಕೊಂಡು ಸ್ವತಂತ್ರವಾಗಿ ಬಾಳಬೇಕೆಂಬುದೇ ಅವನ ದೃಢ ನಿರ್ಧಾರ. ಆ ಧ್ಯೇಯವನ್ನು ಕಾಪಾಡಿಕೊಂಡ. 

	ಎನಿಯಸ್ ರೋಮಿಗೆ ಕಾಲಿಟ್ಟ ಹೊತ್ತು ಅವನಿಗೆ ಶುಭಪ್ರದ ಸಮಯವಾಯಿತು. ಗ್ರೀಕ್ ರುದ್ರ ನಾಟಕಗಳನ್ನು ಲ್ಯಾಟನ್ನಿಗೆ ತಂದು ಉಚ್ಚ ಸಾಹಿತಿಗಳೆಂದೆನ್ನಿಸಿಕೊಂಡಿದ್ದ ಅಂಡ್ರಾನಿಕಸ್, ನೀವಿಯಸ್ ಇಬ್ಬರೂ ಕೆಲವು ಸಂವತ್ಸರಗಳ ಹಿಂದೆಯೇ ಸತ್ತುಹೋಗಿದ್ದರು. ತೆರವಾದ ಅವರ ಸ್ಥಾನ ಎನಿಯಸ್ಸನದಾಯ್ತು. ಹೀಗಾದರೂ ಆಗ ವಿನೋದನಾಟಕಕಾರ ಪ್ಲಾಟಸನ ಪ್ರಭಾವ ಅತಿಶಯವಾಗಿ ಹರಡಿತ್ತಾಗಿ, ಎನಿಯಸ್ ದೊಡ್ಡ ಸವಾಲೊಂದನ್ನು ಎದುರಿಸಬೇಕಾಯಿತು. ರಸಿಕರ ಅಭಿರುಚಿಯನ್ನು ರುದ್ರನಾಟಕದ ಕಡೆಗೆ ಸೆಳೆಯಬೇಕು, ತನ್ಮೂಲಕ ಉದಾತ್ತ ತತ್ತ್ವಗಳೂ ಮೇಲ್ಮಟ್ಟದ ಸಂಸ್ಕøತಿಯೂ ಅವರಿಗೆ ಅಪೇಕ್ಷಣೀಯವಾಗುವಂತೆ ಮಾಡಬೇಕು. ಆ ಮಹತ್ಕಾರ್ಯಕ್ಕೆ ಅನುವಾಗಬಲ್ಲ ವಿದ್ವತ್ತೂ ಶಕ್ತಿಯೂ ಎನಿಯಸ್ಸಿನಲ್ಲಿತ್ತು. ಅಲ್ಲದೆ ಅನೇಕ ಕುಲೀನರೂ ಶ್ರೀಮಂತರೂ ಘನತತ್ತ್ವಗಳನ್ನು ಕಲಿಯಲು ಆತುರರಾಗಿದ್ದರು; ಸಂಸ್ಕøತರೆನ್ನಿಸಿಕೊಳ್ಳುವ ಹೆಬ್ಚಯಕೆಯೂ ಅವರಲ್ಲಿ ಮೂಡಿ ಬಂದಿತ್ತು. ಆದ್ದರಿಂದ ಎನಿಯಸ್ಸನ ಕೆಲಸ ಅಷ್ಟೇನೂ ಕಷ್ಟಕರವಾಗಿರಲಿಲ್ಲ. ಪ್ರಚಂಡ ಪ್ರತಿಭೆಯೇನೂ ಅವನಲ್ಲಿ ಇಲ್ಲದಿದ್ದುದರಿಂದ, ಅವನ ಎತ್ತರ ಅವರಿಗೆ ನಿಲುಕಬಹುದಾಗಿದ್ದರಿಂದ, ಅವನ ಬರವಣಿಗೆ ಅವರ ಮೆಚ್ಚಿಕೆಗೆ ಪಾತ್ರವಾಗಿ, ಅವರಲ್ಲಿ e್ಞÁನವಿಕಾಸವನ್ನುಂಟುಮಾಡಿತು. 

	ಉಪದೇಶಪ್ರಮುಖ ಪದ್ಯ, ವಿನೋದ ನಾಟಕ, ವಿಡಂಬನ ಕಾವ್ಯ, ಜಿಜ್ಞಾಸಾತ್ಮಕ ಪದ್ಯ, ನಾಟುನುಡಿ ಮುಂತಾದ ಹಲವು ಪ್ರಕಾರದ ಲೇಖನಗಳು ಎನಿಯಸ್ಸನಿಂದ ನಿರ್ಮಿತವಾದುವು. ಆದರೂ ಅವನಿಗೆ ಕೀರ್ತಿ ತಂದ ಕಾವ್ಯಪ್ರಭೇದಗಳು ಎರಡು : ರುದ್ರನಾಟಕ, ಪದ್ಯ ಬಖೈರು (ಅನಲ್ಸ್). ಅವನದೆಂದು ನಿಶ್ಚಯಿಸಿರುವ 25 ಗಂಭೀರ ನಾಟಕಗಳ ಪಟ್ಟಿಯಿದೆ. ಅವುಗಳಲ್ಲಿ ಒಂದೂ ಪೂರ್ತಿಯಾಗಿ ಉಪಲಬ್ಧವಾಗಿಲ್ಲ; ಪ್ರತಿಯೊಂದರಿಂದಲೂ ಚೂರುಪಾರು ಉಳಿದು ಬಂದಿದೆ. ಅಕಿಲೀಸ್, ಎಜ್ಯಾಕ್ಸ್, ಹೆಕೂಬ, ಅಂಡ್ರೊಮಕೆ, ಐಫಿಜೆನಯ-ಮೊದಲಾದ ಅಂಕಿತಗಳನ್ನು ಗಮನಿಸಿದರೆ, ಅವನ ನಾಟಕಗಳಲ್ಲಿ ಅರ್ಧ ಭಾಗ ಟ್ರಾಯ್ ಸಂಗ್ರಾಮಕ್ಕೆ ಸಂಬಂಧಿಸಿದವೆಂದು ತಿಳಿಯುತ್ತದೆ. ಅವನ ಮೀಡಿಯ ಎಂಬ ನಾಟಕ ಯುರಿಪಿಡೀಸನ ಅದೇ ಹೆಸರಿನ ನಾಟಕದ ಚಾಚೂ ತಪ್ಪದ ಭಾಷಾಂತರ. ಇತರ ಕೆಲವು ನಾಟಕಗಳಲ್ಲೂ ಆ ಮಹಾ ನಾಟಕಕಾರನಿಗೆ ಅವನು ತುಂಬ ಋಣಿ. ಅಷ್ಟೇಕೆ, ಯುರಿಪಿಡೀಸನೇ ಎನಿಯಸ್ಸನಿಗೆ ಮಾದರಿ, ಹೆಗ್ಗುರಿ. ಹೀಗಿದ್ದರೂ ಕೆಲವು ಪ್ರಧಾನಾಭಿಪ್ರಾಯಗಳಲ್ಲೂ ಒಟ್ಟಿನ ದೃಷ್ಟಿಕೋನದಲ್ಲೂ ಎನಿಯಸ್ ರೋಮಿನಾತನೆಂಬುದು ಸುಸ್ಪಷ್ಟವಾಗಿ ಎದ್ದು ಕಾಣುತ್ತದೆ. ರೋಮನರ ಸಾಹಸ, ಶಿಸ್ತು, ಶ್ರಮಸಹಿಷ್ಣುತೆ, ನಿಷ್ಕಪಟತ್ವಗಳನ್ನು ಪೌರಾಣಿಕ ಗ್ರೀಕ್ ವೀರರಿಗೂ ಆತ ಅನ್ವಯಿಸುತ್ತಾನೆ. 

	ಚಿತ್ತ ಕದಡುವ ರಾಗೋದ್ರೇಕವನ್ನೂ ಹೃದಯಸ್ಪರ್ಶಿಯಾಗುವಂಥ ಕರುಣರಸವನ್ನೂ ಪ್ರತಿಪಾದಿಸುವುದರಲ್ಲಿ ಎನಿಯಸ್ ಪ್ರವೀಣ. ಬಲಿಷ್ಠ ಸಂಭಾಷಣೆಗಳನ್ನು ಜೋಡಿಸುವುದರಲ್ಲೂ ಎತ್ತಿದ ಕೈ. ಭಾವ, ಭಾವನೆಗಳಿಗೆ ಅನುರೂಪವಾಗಿ ಛಂದಸ್ಸನ್ನು ಮಾರ್ಪಡಿಸುವ ಜಾಣ್ಮೆಯೂ ಅವನಲ್ಲಿ ತುಂಬಿತ್ತು. ನಾಟಕಗಳಲ್ಲಿ ಸಾಮಾನ್ಯವಾಗಿ ನಿಧಾನ ನಡಿಗೆಯ ತೂಕವಾದ ಪಂಕ್ತಿಗಳೇ ಹೆಚ್ಚು. ಉದ್ವೇಗದ ಸಂದರ್ಭ ಬಂದಾಗ ಛಂದೋಧೋರಣೆ ತ್ವರಿತಗೊಳ್ಳುತ್ತದೆ. ಆವೇಶ ಅತ್ಯಂತ ತೀವ್ರವಾಗಿ ಅನುಕಾರ್ಯದ ಆಂತರ್ಯ ವಿಪರೀತ ಉಕ್ಕೇರಿದಾಗ ಒಡೆದು ಹೋದಂತೆ ತೋರುವ ಪದಬಂಧ ಕೇಳಿ ಬರುತ್ತದೆ. 

	ರೋಮನರ ಪೂರ್ವ ಚರಿತ್ರೆಗೆ ಸೇರಿದ ಎರಡು ರೂಪಕಗಳನ್ನು ಎನಿಯಸ್ ರಚಿಸಿದ. ಅವು ಪ್ರಾಯಶಃ ಯಾವುದೋ ವಿಜಯೋತ್ಸವ ಸಮಾರಂಭಕ್ಕಾಗಿ ಯಾರಾದವು. ಆದ್ದರಿಂದ ಆಲೋಚನೆಗಿಂತ ಹೆಚ್ಚಾಗಿ ದೃಶ್ಯಕ್ಕೆ ರುಚಿಯಾಗುವ ಅಂಶ ಅವುಗಳಲ್ಲಿ ತಾನೇ ತಾನಾಗಿದೆ. 										(ಎಸ್.ವಿ.ಆರ್.)

	ಈತನ ಕಾವ್ಯಕೃತಿ ಹೋಮರನ ಶೈಲಿಯಲ್ಲಿದೆ. ಇದರ ವಸ್ತು ರೋಮಿನ ಇತಿಹಾಸ. ಹದಿನೆಂಟು ಆಶ್ವಾಸಗಳಿಂದ (ಆರುನೂರು ಪದ್ಯ) ಕೂಡಿದ ಈ ಕಾವ್ಯ ಉತ್ಕಟ ರಾಷ್ಟ್ರಪ್ರೇಮವನ್ನು ಉದ್ದೀಪನಗೊಳಿಸುವಂಥ ಅಮೋಘವಾದ ಕೃತಿ. ಗ್ರೀಕ್ ಕಾವ್ಯಗಳ, ನಾಟಕಗಳ ಕೇವಲ ಭಾಷಾಂತರವೋ ಅನುಕರಣೆಯೋ ಕಾಣುತ್ತಿದ್ದ ಲ್ಯಾಟಿನ್ ಸಾಹಿತ್ಯದಲ್ಲಿ ಮೊದಲ ಬಾರಿಗೆ ಸ್ವತಂತ್ರವಾದ ಮಹಾಕಾವ್ಯವೊಂದನ್ನು ರಚಿಸಿದ ಈತನಿಗೆ ಆದಿಕವಿ ಎಂಬ ಹೆಸರು ಬಂತು. ರೂಕ್ಷಾವಸ್ಥೆಯಲ್ಲಿದ್ದ ಲ್ಯಾಟಿನ್ ಭಾಷೆಗೆ ತನ್ನ ಲೇಖನಿಯಿಂದ ಕಾವ್ಯದ ಹದವನ್ನು ತಂದುಕೊಟ್ಟ ಕೀರ್ತಿಯೂ ಗ್ರೀಕಿನ ಹೆಕ್ಸಾಮೀಟರ್ ಛಂದಸ್ಸನ್ನು ಮೊಟ್ಟಮೊದಲಿಗೆ ಲ್ಯಾಟಿನ್ನಿಗೆ ಅಳವಡಿಸಿಕೊಂಡ ಹೆಚ್ಚಳವೂ ಇವನದು. ಲ್ಯಾಟಿನ್ ಭಾಷೆ ಹಾಗೂ ಸಾಹಿತ್ಯಗಳ ಮೇಲೆ ಈತ ಬೀರಿದ ಪ್ರಭಾವ ಪ್ರಗಾಢವಾದುದು. ಬಹಳ ಕಾಲದವರೆಗೂ ಅನೇಕ ಕವಿಗಳಿಗೆ ಈತನ ಕೃತಿಗಳಿಂದಲೇ ಸ್ಫೂರ್ತಿಯೊದಗಿತು. ವರ್ಜಿಕಲ್ ಕವಿಯೂ ಈತನಿಂದ ಪ್ರಭಾವಿತನಾಗಿದ್ದನೆಂಬ ಮಾತೂ ಇದೆ. 

	ಈತನ ಈ ಕಾವ್ಯದ ಕೇವಲ ಕೆಲವು ತುಣುಕುಗಳು ಮಾತ್ರ ಉಳಿದುಬಂದಿವೆ. 

	ಈತ ತನ್ನ ಸಮಾಧಿಯ ಮೇಲೆ ಬರೆಯಲೆಂದು ತಾನೆ ಬರೆದಿಟ್ಟ ಚರಮವಾಕ್ಯ ಸ್ಮರಣೀಯವಾಗಿದೆ. ತನ್ನ ಕೃತಿಗಳ ಅಮರತೆಯ ಬಗ್ಗೆ ಎಂಥ ಆತ್ಮಪ್ರತ್ಯಯ ಇವನಿಗಿತ್ತು ಎಂಬುದಕ್ಕೆ ಈ ಮಾತೇ ಸಾಕ್ಷಿ : "ನನ್ನ ಸಾವಿಗಾಗಿ ಯಾರೂ ಆಳಬೇಕಾಗಿಲ್ಲ; ದುಃಖಿಸುತ್ತ ಅಂತ್ಯ ಸಂಸ್ಕಾರ ಮಾಡಬೇಕಾಗಿಲ್ಲ. ಏಕೆಂದರೆ ಜನರ ಬಾಯಿಂದ ಬಾಯಿಗೆ ಓಡಾಡುತ್ತ ನಾನು ಇನ್ನೂ ಬದುಕಿರುತ್ತೇನೆ."
 				
	 (ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ